ನಾಯ್ಡು, ಆರ್ ಎಸ್
	1906-1985. ಕರ್ನಾಟಕದ ಪ್ರಸಿದ್ದ ಚಿತ್ರಕಾರ, ಶಿಲ್ಪಿ. ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ರಂಗಸ್ವಾಮಿ. ತಾಯಿ ರಂಗನಾಯಕಮ್ಮ. ಸಹೋದರ ಭೂವಿಜ್ಞಾನ ಪ್ರಾಧ್ಯಾಪಕರಾಗಿದ್ದ ಜಗಪತಿ ನಾಯ್ಡು.

	ಇವರ ಬಾಲ್ಯದ ವಿದ್ಯಾಭ್ಯಾಸ ಕೆಲಕಾಲ ತಿರುಚರಾಪಳ್ಳಿಯಲ್ಲಿಯೂ ಅನಂತರ ಧಾರವಾಡದಲ್ಲಿಯೂ ನಡೆಯಿತು. ಆಟಪಾಟಗಳೊಂದಿಗೆ ಚರ್ಚಾಕೂಟಗಳಲ್ಲೂ ಭಾಗವಹಿಸುತ್ತಿದ್ದರು. ಪುಣೆಯ ಪಗ್ರ್ಯೂಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಯುವಕ ಕಾಂಗ್ರೆಸ್ ಸಂಸ್ಥೆಯೊಂದನ್ನು ಕಟ್ಟಿದರು. ಕಾಂಗ್ರೆಸ್ ಚಟುವಟಿಕೆಯಲ್ಲಿ ಓಡಾಡತೊಡಗಿ ಮೊದಲ ಬಾರಿಗೆ ಆರು ತಿಂಗಳ ಸಾದಾ ಸಜೆಯನ್ನು ಜೈಲಿನಲ್ಲಿ ಅನುಭವಿಸಿದರು (1933). ಎರಡನೆಯ ಬಾರಿ ಕಠಿಣ ಶಿಕ್ಷೆಗೊಳಗಾದ್ದು 1943 ರಲ್ಲಿ. ಇವರಿದ್ದ ಯರವಾಡಾ ಜೈಲಿನಲ್ಲಿ ಗಾಂಧೀಜಿ, ಮಹಾದೇವ್ ದೇಸಾಯಿ, ಜಮನಾಲಾಲ್, ಬಜಾಜ್ ಮುಂತಾದ ಗಣ್ಯ ರಾಷ್ಟ್ರಭಕ್ತರೂ ಇದ್ದರು. ಆ ಜೈಲಿನಲ್ಲಿ ಎದ್ದು ಕಾಣುತ್ತಿದ್ದ ಪ್ರಾಂತೀಯ ಪಕ್ಷಪಾತವನ್ನು ಇವರು ಪ್ರತಿಭಟಿಸಿದರು. ಇದನ್ನು ಸಹಿಸಲಾರದ ಸರ್ಕಾರ ಜೈಲುಶಿಕ್ಷೆಯ ಅವಧಿಯನ್ನು ಹೆಚ್ಚಿಸಿತು. ಅದೇ ಕಾಲಕ್ಕೆ ಜರ್ಮನ್ ದಿನಪತ್ರಿಕೆ ಸಂಪಾದಕರೊಬ್ಬರ ಸ್ನೇಹದಿಂದ ಮಾಕ್ರ್ಸವಾದವನ್ನು ಸ್ವೀಕರಿಸಿದರು. ಕಾಂಗ್ರೆಸ್ ದಿನಾಚರಣೆಯಂದು ಜೈಲಿನಲ್ಲಿದ್ದ ತಮ್ಮ ಮಿತ್ರರ ಸಹಾಯದಿಂದ ಜೇಡಿ ಮಣ್ಣನ್ನು ತರಿಸಿ ರಾತ್ರಿಯೆಲ್ಲಾ ನಿದ್ರೆಗೆಟ್ಟು ನಾಲ್ಕಡಿ ಗಾತ್ರದ ಕ್ರಾಂತಿವೀರ್ ಲೆನಿನ್ ಮೂರ್ತಿಯನ್ನು ಸೃಜಿಸಿದರು. ಸೆರೆಮನೆಯಿಂದ ಹೊರಬಂದ ಮೇಲೆ ಇವರ ಮನಸ್ವಾಸ್ಥ್ಯ ಕೆಟ್ಟಿತು. ಕಿರಿಕಿರಿ ವಾತಾವರಣದಲ್ಲಿ ಬಾಳತೊಡಗಿದರು. ಜೀವನದಲ್ಲಿ ಜುಗುಪ್ಸೆಗೊಂಡು ಮುಂಬಯಿಯಲ್ಲಿ ತಾವು ವಾಸಿಸುತ್ತಿದ್ದ ಮಹಡಿಯಿಂದ ಕೆಳಕ್ಕೆ ದುಮುಕಿ ಸಾಯಲು ಪ್ರಯತ್ನಿಸಿ ವಿಫಲರಾದರು. ಚಿಂತೆ ಮರೆಯಲು ಪುಸ್ತಕಗಳ ಮೊರೆ ಹೊಕ್ಕರು. ಯುವಕರನ್ನು ಬ್ರಿಟಿಷ್ ಸರ್ಕಾರದ ವಿರುದ್ಧ ಹುರಿದುಂಬಿಸುವ ಸಲುವಾಗಿ ಒಂದು ಯುವಜನ ಸಂಸ್ಥೆ ಕಟ್ಟಿಕೊಂಡರು. ಅದರ ವತಿಯಿಂದ ಒಂದು ಕ್ರಾಂತಿಕಾರಿ ಪತ್ರಿಕೆಯೂ ಹೊರಬಂತು. ಪೊಲೀಸ್ ಚಿತ್ರಗುಪ್ತರ ದೃಷ್ಟಿ ಇವರ ಮೇಲೆ ಬಿತ್ತು. ಆಗ ಇವರು ಭೂಗತರಾಗಬೇಕಾಯಿತು. ಇವರ ಉಪಟಳ ಹೆಚ್ಚಾದಾಗ ಗುಪ್ತಚಾರರು ಇವರನ್ನು ಬಂಧಿಸಿದರು. ಮತ್ತೆ ಕೆಲವು ತಿಂಗಳ ಶಿಕ್ಷೆ ಅನುಭವಿಸಬೇಕಾಯಿತು. ಅನಂತರ ರಾಜಕೀಯ ಬುದ್ಧಿಜೀವಿಗಳಾದ ಮೆಹರಾಲಿ,  ಮೀನೂ ಮಸಾನಿ, ಅಶೋಕ ಮೆಹ್ತಾ ಮುಂತಾದವರ ಜೊತೆಗೆ ಸೇರಿ ಸಮಾಜವಾದಿ ಪಕ್ಷ ಕಟ್ಟಿದರು. ಅವರ ವತಿಯಿಂದ ಭಾರತದ ಆರ್ಥಿಕತೆ ಬಗ್ಗೆ ಪಿಕ್ಟೋರಿಯಲ್ ಎಕನಾಮಿಕ್ಸ್ ಎಂಬ ಸಚಿತ್ರ ವಾರಪತ್ರಿಕೆಯನ್ನು ಪ್ರತಿ ವಾರವೂ ಪ್ರಕಟಿಸುತ್ತಿದ್ದರು. ನ್ಯಾಷನಲ್ ಫ್ರೆಂಚ್ ಪತ್ರಿಕೆಯಲ್ಲಿ ಆಗಾಗ ಇವರ ಕ್ರಾಂತಿಕಾರಿ ವ್ಯಂಗ್ಯಚಿತ್ರಗಳು ಪ್ರಕಟವಾಗಿದ್ದವು.

	ಲಂಡನ್ನಿಗೆ ಹೋಗಿ ಅಲ್ಲಿ ಇದ್ದಷ್ಟು ಕಾಲವನ್ನು ಕಾರ್ಮಿಕರೊಂದಿಗೆ ಕಳೆದರು. ಅಲ್ಲಿಂದ ಮಾಸ್ಕೋಗೆ ಹೋಗಬೇಕೆಂಬ ಆಸೆ ಎರಡನೆಯ ಮಹಾಯುದ್ದದಿಂದಾಗಿ ನೆರವೇರಲಿಲ್ಲ. ತಪ್ಪಿಸಿಕೊಂಡಾದರೂ ಮಾಸ್ಕೋ ಮುಟ್ಟಬೇಕೆಂದಿದ್ದರೂ ಗುಪ್ತಚಾರರಿಂದಾಗಿ ಸಾಧ್ಯವಾಗಲಿಲ್ಲ. ಅದೇ ವೇಳೆಗೆ ಭಾರತದಿಂದ ಕರೆ ಬಂತು. ವಾಪಾಸು ಬರಲು ಹಡಗಿನಲ್ಲಿ ಅವಕಾಶ ದೊರೆಯಲಿಲ್ಲ. ಒಬ್ಬ ಭಾರತೀಯ ವಿದ್ಯಾರ್ಥಿಯ ನೆರವಿನಿಂದಾಗಿ ತಾಯಿನಾಡು ತಲುಪಿದರು.

	ಮುಂಬಯಿಗೆ ಮರಳಿ ಕೆಲವು ವರ್ಷ ಅಲ್ಲಿ ಕಳೆದರು. ಒಮ್ಮೆ ಗುಜರಾತಿನ ಸ್ವಾರ್ಥಲಂಪಟರ ವ್ಯಂಗ್ಯಚಿತ್ರವನ್ನು ಶೀಸೆಯ ಆಕೃತಿಯಲ್ಲಿ ರಚಿಸಿ ಪ್ರಕಟಿಸಿದರು. ಆ ಚಿತ್ರದ ಬಗ್ಗೆ ಎಲ್ಲಾಕಡೆಯೂ ಗುಲ್ಲೆದ್ದಿತು. ಎಲ್ಲರ ಗಮನವನ್ನು ಅದು ಶೀಘ್ರವಾಗಿ ಸೆಳೆಯಿತು. ಕೊನೆಗೆ ಬೆಂಕಿಪಟ್ಟಣದ ಮೇಲೆಯೂ ಅದು ಕಾಣಿಸಿಕೊಂಡಿತು. ಮುಂಬಯಿಯಿಂದ ಕಲ್ಕತ್ತದವರೆಗೂ ಅದರ ಕೀರ್ತಿ ಹರಡಿತು.

	ಮುಂಬಯಿ ಬೇಸರ ಬಂದಾಗ ಬೆಂಗಳೂರಿಗೆ ಬಂದು ಸೇರಿದರು. ಅಲ್ಲಿಂದ ಮೈಸೂರಿಗೆ ಬಂದು ನೆಲೆಸಿದ್ದು 1957 ರಲ್ಲಿ. ಇವರ ಕುಂಚ ವಿಡಂಬನಾತ್ಮಕ ರೇಖಾಚಿತ್ರದಿಂದ ವರ್ಣಚಿತ್ರದವರೆಗೆ ಕೆಲಸ ಮಾಡಿದೆ. ಇವರು ಮೊದಲಿಂದಲೂ ಸಾಂಪ್ರದಾಯಿಕ ಕಲೆಯನ್ನು ಒಪ್ಪಿದವರಾದರೂ ಅಂದ ಚಂದಗಳ ಅಂಧಾನುಕರುಣೆಗೆ ಮಾರು ಹೋದವರಲ್ಲ. ಇವರ ಕಲೆ ಬರೀ ತಾಂತ್ರಿಕವಾಗಿ ಉಳಿಯಲಿಲ್ಲ. ಯಾರೊಬ್ಬರ, ಯಾವೊಂದರ ಪ್ರಭಾವಕ್ಕೂ ಇವರು ಬಲಿ ಬೀಳಲಿಲ್ಲ. ಜೀವನದ ಸಿಹಿಕಹಿಗಳ ತೂಗಾಟದಲ್ಲಿ ಬೆಳೆದು ಬಂದ ಈ ಹಿರಿಯ ಜೀವಿಗೆ ಸಾಮಾನ್ಯ ಮಾನವನ ಬಗ್ಗೆ ಆಳವಾದ ಅನುಕಂಪ, ಸಹಾನುಭೂತಿ ಮೈಗೂಡಿ ಬಂದಿದೆ.

	ಇವರು ರಚಿಸುವ ಚಿತ್ರಗಳಲ್ಲಿ ಜೀವಂತಿಕೆ, ಸಾದೃಶ್ಯ ತುಂಬಿ ತುಳುಕುತ್ತವೆ. ರೇಖೆಗಳಲ್ಲಿ ಅದ್ಭುತನಿರೂಪಣೆ, ಗತಿವಿನ್ಯಾಸಗಳನ್ನು ಸೂಚಿಸುವ ಮಿತವ್ಯಯದ ನೂತನ ಶೈಲಿಯಿಂದಾಗಿ ಸಾಮರಸ್ಯವನ್ನು ಕಾಣುತ್ತೇವೆ. ಇವರು ಎಳೆಯುವ ಪ್ರತಿಯೊಂದು ಗೆರೆಯೂ ಇವರ ಹೃದಯದ ಅಂತರಾಳದಿಂದ ನೇರ ಚಿಮ್ಮಿದಂತಿರುತ್ತದೆ. ಇವರ ರೇಖಾಚಿತ್ರಗಳ ವಸ್ತುವಿಶೇಷ, ಕಲ್ಪನಾಶಕ್ತಿ ಅಸಾಧಾರಣವಾದದ್ದು. ಬುದ್ಧ, ಲೆನಿನ್, ಗಾರ್ಕಿ, ಕುವೆಂಪು, ಕೈಲಾಸಂ ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳ ಭಾವಶಿಲ್ಪ ರಚನೆ ಮಾಡಿದ್ದರು.						
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
		(ಪಿ.ಆರ್.ಟಿ)